ಡಾ. ಕಲ್ಮಾಡಿ ಶ್ಯಾಮರಾವ್ ಹೈಸ್ಕೂಲಿನ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಕವಿಗೋಷ್ಠಿಯನ್ನು ಫೆಬ್ರುವರಿ 03 ನೆಯ ತಾರೀಖಿನಂದು ಏರ್ಪಡಿಸಲಾಗಿತ್ತು. ಕನ್ನಡ ನಿತ್ಯೋತ್ಸವ ವೇದಿಕೆಯಲ್ಲಿ, ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಂದಲೇ ಆಯೋಜಿಸಲ್ಪಟ್ಟ, ನಿರೂಪಿಸಲ್ಪಟ್ಟ ಕವಿಗೋಷ್ಠಿಯಲ್ಲಿ ಒಟ್ಟು ೩೨ ವಿದ್ಯಾರ್ಥಿಗಳು ನಿಸರ್ಗದ ಬಗ್ಗೆ, ಕೌಟುಂಬಿಕ ಸಂಬಂಧಗಳ ಬಗ್ಗೆ ಸುಂದರ ಸ್ವರಚಿತ ಕವನಗಳನ್ನು ವಾಚಿಸಿದರು. ನಿತ್ಯೋತ್ಸವ ವೇದಿಕೆಯ ಅಧ್ಯಕ್ಷರಾದ ವಿದ್ಯಾರ್ಥಿ ದರ್ಶನ ಮೇಲಿನಮನಿ ಕಾರ್ಯಕ್ರಮದ ಅಧ್ಯಕ್ಷರಾಗಿ ವೇದಿಕೆಯಲ್ಲಿದ್ದರು. ಕಾರ್ಯದರ್ಶಿಗಳಾದ ತಿಪ್ಪಮ್ಮ ಚಿಗನೂರ, ಮತ್ತು ಐಶ್ವರ್ಯಾ ಜೇವರ್ಗಿ, ಉಪಾಧ್ಯಕ್ಷೆ ಭಾಗ್ಯಶ್ರೀ ರಾಮೋಶಿ ಅವರೊಂದಿಗೆ ಇದ್ದರು.
ಶಿಕ್ಷಕಿ ಶ್ರೀಮತಿ ಶೋಭಾ ಪಂಚಾಂಗಮಠ ಅವರು ಬರೆದ ನಿತ್ಯೋತ್ಸವದ ಹಬ್ಬ ಎಂಬ ಹಾಡನ್ನು ವಿದ್ಯಾರ್ಥಿಗಳು ಸುಂದರವಾಗಿ ಹಾಡುವುದರೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಆಗಮಿಸಿದ ಅತಿಥಿಗಳನ್ನು ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಚಂದ್ರಕಾಂತ ಹಾರಕುಡೆಯವರು ಸತ್ಕರಿಸಿದರು. ಒಂಬತ್ತು ಮತ್ತು ಹತ್ತನೆಯ ವರ್ಗದ ವಿದ್ಯಾರ್ಥಿಗಳಾದ ಭಾಗ್ಯಶ್ರೀ ರಾಮೋಶಿ, ತಿಪ್ಪಮ್ಮಾ ಚಿಗನೂರ , ಐಶ್ವರ್ಯಾ ಜೇವರ್ಗಿ, ಸದ್ದಾಂ ಮುಲ್ಲಾ, ವಿಶಾಲ ಮಾಂಜರೆಕರ್ , ದರ್ಶನ್ ಮೇಲಿನಮನಿ , ಲಕ್ಷ್ಮೀ ಬಾಗಾಯತದಾರ ಇವರು ನಡೆಸಿಕೊಟ್ಟರು.
ಮುಖ್ಯ ಅತಿಥಿ ಶ್ರೀ ಕೃಷ್ಣ ಇತ್ನಾಳರವರು “ಈ ವಯಸ್ಸಿನಲ್ಲಿ ಕವಿತೆಗಳನ್ನು ಬರೆಯುವದರಿಂದ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಸಾಧ್ಯವಿದೆ, ವಾಸ್ತವಿಕ ಜೀವನದ ಬಗ್ಗೆ ವಿದ್ಯಾರ್ಥಿಗಳು ಬರೆದ ಕವನಗಳು ಸೊಗಸಾಗಿದ್ದವು, ಹೀಗೆಯೇ ನೀವು ಬರೆಯುತ್ತಾ ಇರಬೇಕು.’’ ಎಂದರು. ಅತಿಥಿಯಾಗಿ ಬಂದಿದ್ದ ಶ್ರೀಮತಿ ಅನ್ನಪೂರ್ಣ ಸಕ್ರೋಜಿ “ ದೊಡ್ಡವರನ್ನು ಮೀರಿಸುವಂತೆ ಕೆಲವು ಮಕ್ಕಳು ಕವಿತೆಗಳನ್ನು ಬರೆದಿದ್ದಾರೆ ’’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ ತಾವು ಬರೆದ ವಚನ, ಆಬಾಗಿ, ತ್ರಿಪದಿಯ ಕವನಗಳನ್ನು ವಾಚಿಸಿದರು.ಅತಿಥಿ ಶ್ರೀಮತಿ ಕುಸುಮ ಸಾಲಿಯಾನ್ ರು ಮಾತನಾಡುತ್ತ “ ಈ ರೀತಿಯ ಒಂದು ಕವಿಗೋಷ್ಠಿಯನ್ನು ಕಂಡು ನನಗೆ ಆಶ್ಚರ್ಯವಾಗಿದೆ. ಕರ್ನಾಟಕದಲ್ಲಿ ಎಲ್ಲಿಯೂ ಇಂತಹ ಕವಿಗೋಷ್ಠಿಯನ್ನು ನಾನು ನೋಡಲಿಲ್ಲ. ಇನ್ನು ಮುಂದೆ ಪುಣೆಯಲ್ಲಿ ಬಹಳಷ್ಟು ಕವಿಮನಗಳು ಬೆಳೆಯಲು ಸಾಧ್ಯ’’ ಎಂದರು.
ವಿದ್ಯಾರ್ಥಿಗಳನ್ನು ಕವನ ಬರೆಯಲು ಹುರಿದುಂಬಿಸುತ್ತಾ, ಬಂದಿರುವ ಕನ್ನಡ ಸಂಘದ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ ಸಾಲಿಯಾನರು ಮಕ್ಕಳು ನಿಸರ್ಗದ ಬಗ್ಗೆ ಬರೆದ ವೈವಿಧ್ಯಮಯ ಕವನಗಳನ್ನು ಮತ್ತು ಅವರ ಪ್ರಯತ್ನವನ್ನು ಶ್ಲಾಘಿಸಿದರು. ಕಾಯಿಪಲ್ಲೆಗಳ ಸಭೆಗೆ ಕುಂಬಳಕಾಯಿಯನ್ನು ಅಧ್ಯಕ್ಷರನ್ನಾಗಿಸಿ, ವಿದ್ಯಾರ್ಥಿ ಐಶ್ವರ್ಯ ಬರೆದ ಕವನವನ್ನು ತಾಳ ಬದ್ಧವಾಗಿ ಹಾಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಮಾಡಲು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ ಶ್ರೀ ಚಂದ್ರಕಾಂತ ಹಾರಕುಡೆಯವರನ್ನು, ಕಾರ್ಯಕ್ರಮದ ಸಂಯೋಜನೆ ಮಾಡಿದ ಶೋಭಾ ಪಂಚಾಂಗಮಠ ಆವರನ್ನು, ಸಹಕರಿಸಿದ ಎಲ್ಲ ಶಿಕ್ಷಕರನ್ನು ಅಭಿನಂದಿಸಿದರು. ತಮ್ಮದೇ ಸ್ವರಚಿತ ಕವನವನ್ನು ಹಾಡಿದರು. ಸಭೆಯಲ್ಲಿ ಶ್ರೀ ಪಾಂಗಾಳ ವಿಶ್ವನಾಥಶೆಟ್ಟಿ, ಸುಭಾಶ್ಚಂದ್ರ ಸಕ್ರೋಜಿ, ಡಾ. ಶೋಭಾ ಜೋಶಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕಾವ್ಯಾಂಜಲಿ ಮತ್ತು ನಾಗರತ್ನಾ ವಂದಿಸಿದರು.
